ಕೇಕೂಲೇ, ಫಾನ್ ಷ್ಟ್ರಾಡೊನಿಟ್ಸ್, ಫ್ರೀಡ್ರಿಕ್ ಆಗಸ್ಟ್
 	1829-1896. ಜರ್ಮನಿಯ ರಸಾಯನ ವಿಜ್ಞಾನಿ. ಜನನ 1829ನೆಯ ಸೆಪ್ಟೆಂಬರ್ 7 ರಂದು ಜರ್ಮನಿಯ ಡಾರ್ಮ್‍ಸ್ಟಾಟಿನಲ್ಲಿ. ಚಿಕ್ಕಂದಿನಿಂದಲೇ ಇವನಿಗೆ ತಾನೊಬ್ಬ ಪ್ರಖ್ಯಾತ ವಾಸ್ತುಶಿಲ್ಪಿಯಾಗಬೇಕೆಂಬ ಹೆಬ್ಬಯಕೆ ಇತ್ತು. ಈ ಹಂಬಲದೊಂದಿಗೆ ಇವನು ಗಿಸನ್ ವಿಶ್ವವಿದ್ಯಾಲಯವನ್ನು ಸೇರಿದ. ಅಲ್ಲಿ ಪ್ರಸಿದ್ಧ ರಸಾಯನ ವಿಜ್ಞಾನಿಯಾದ ಫಾನ್ ಲಿಬಿಗ್‍ನ ಪ್ರಭಾವಕ್ಕೆ ಈತ ಒಳಗಾಗಿ ರಸಾಯನವಿಜ್ಞಾನವನ್ನು ಅಭ್ಯಸಿಸಲು ನಿರ್ಧರಿಸಿದ. ವಾಸ್ತುಶಿಲ್ಪದಲ್ಲಿ ಆಸಕ್ತವಾಗಿದ್ದ ಈತನ ಬುದ್ಧಿ ಬೇಗನೆ ಇಂಗಾಲದ ಸಂಯುಕ್ತಗಳ ರಸಾಯನ ವಿಜ್ಞಾನವನ್ನು (ಆಗ್ರ್ಯಾನಿಕ್ ಕೆಮಿಸ್ಟ್ರಿ) ಅರಗಿಸಿಕೊಂಡಿತು. ಇವನ ಪ್ರತಿಭೆಯನ್ನು ಗುರುತಿಸಿದ ಗಿಸನ್ ವಿಶ್ವವಿದ್ಯಾಲಯ 1852ರಲ್ಲಿ ಇವನಿಗೆ ಡಾಕ್ಟರೇಟ್ ಪದವಿಯನ್ನು ಕೊಟ್ಟು ಗೌರವಿಸಿತು. 1856ರಲ್ಲಿ ಇವನು ಹೈಡಲ್‍ಬರ್ಗ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕನಾದ. 1858ರಲ್ಲಿ ಗೆಂಟ್‍ನಲ್ಲಿ ರಸಾಯನ ವಿಜ್ಞಾನದ ಪ್ರೊಫೆಸರ್‍ಹುದ್ದೆ ಇವನಿಗೆ ಲಭಿಸಿತು. ಇಂಗಾಲದ ವೇಲೆನ್ಸಿ ಮತ್ತು ಹಲವಾರು ಸಂಯುಕ್ತಗಳ ಅಣುಗಳ ರಚನೆ ಇವು ಆಗ್ರ್ಯಾನಿಕ್ ಕೆಮಿಸ್ಟ್ರಿಯಲ್ಲಿ ಅಂದು ಬಲು ತೊಡಕಿನ ಸಮಸ್ಯೆಗಳಾಗಿದ್ದುವು. ಕೇಕೂಲೇ 1858ರಲ್ಲಿ ಒಂದು ಪರಿಹಾರ ಸೂಚಿಸಿದ: ಇಂಗಾಲದ ವೇಲೆನ್ಸಿ ನಾಲ್ಕು; ಮತ್ತು ಇಂಗಾಲದ ಪರಮಾಣುಗಳು ಒಂದಕ್ಕೊಂದು ಕೂಡಿಕೊಂಡು ದೊಡ್ಡ ಸರಪಳಿಯಂಥ ಸಂಯುಕ್ತ ಆಗುತ್ತವೆ ಎಂಬುದೇ ಈ ಪರಿಹಾರ. ಇದು ಇಂಗಾಲದ ಸಂಯುಕ್ತಗಳ ರಸಾಯನಶಾಸ್ತ್ರದ ಆಲಿಫ್ಯಾಟಿಕ್ ವಿಭಾಗದ ಬೆಳೆವಣಿಗೆಗೆ ನಾಂದಿಯಾಯಿತು. ಇಷ್ಟರಲ್ಲಿ ಇವನ ಗಮನ ಆಗಿನ ಮತ್ತೊಂದು ಗಹನ ವಿಷಯವಾದ ಬೆಂಜಿûೀನಿನ ರಚನೆಯ ಕಡೆಗೆ ಹೊರಳಿತು. ಈ ದಿಶೆಯಲ್ಲಿ ಆಳವಾದ ವ್ಯಾಸಂಗ ಮಾಡಿ ಬೆಂಜಿûೀನಿನ ಅಣುರಚನೆಯನ್ನು ಕೇಕೂಲೇ ವಿಶದೀಕರಿಸಿದ (1855). ಈ ಮುಖ್ಯ ಸಿದ್ಧಾಂತದಿಂದ ಸುವಾಸನಾಯುಕ್ತ ಇಂಗಾಲದ ಸಂಯುಕ್ತಗಳ ರಸಾಯನಶಾಸ್ತ್ರ (ಆರೋಮ್ಯಾಟಿಕ್ ಬ್ರಾಂಚ್) ತ್ವರಿತಗತಿಯಿಂದ ಬೆಳೆಯಿತು. ಇಂಗಾಲದ ಸಂಯುಕ್ತಗಳ ರಸಾಯನವಿಜ್ಞಾನದ ಮೇಲೆ ಇವನು ಒಂದು ಪಠ್ಯಪುಸ್ತಕವನ್ನು ಬರೆದ. ಕೇಕೂಲೇ ಕಾಲವಾದದ್ದು 1896ರ ಜುಲೈ 13ರಂದು.

                                   				(ಎಲ್.ಡಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ